ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ:ಚೇತನ್ ಸಿಂಗ್ ರಾಥೋಡ್ ಮುಖ್ಯಸ್ಥರನ್ನಾಗಿ ಆದೇಶ

ಧರ್ಮಸ್ಥಳ(billavawarriors/DK) : ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಉಜಿರೆಯ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ‘ವಿಶೇಷ ತನಿಖಾ ತಂಡ’ದ ಮುಖ್ಯಸ್ಥರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಿಐಡಿ ವಿಭಾಗದಲ್ಲಿ ಐಜಿಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚೇತನ್ ಸಿಂಗ್ ರಾಥೋಡ್ ಅವರಿಗೆ ಇದೀಗ ಎಸ್‌ಐಟಿ ಸಾರಥ್ಯದ ಹೊಸ ಜವಾಬ್ದಾರಿಯನ್ನು ವಹಿಸಲಾಗಿದೆ.
ಇದುವರೆಗೆ ಎಸ್‌ಐಟಿ ಮುಖ್ಯಸ್ಥರಾಗಿದ್ದ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರನ್ನು ಆ ಜವಾಬ್ದಾರಿಯಿಂದ ತೆರವುಗೊಳಿಸಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಶಶಿಕುಮಾರ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ವೈಯಕ್ತಿಕ ಕಾರಣಗಳಿಂದ ತಮ್ಮನ್ನು ಈ ತನಿಖಾ ತಂಡದ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಅವರ ಮನವಿಯನ್ನು ಪರಿಗಣಿಸಿದ ಸರ್ಕಾರ ಹೊಸ ಮುಖ್ಯಸ್ಥರನ್ನು ನೇಮಿಸಿದೆ.
ಎಸ್‌ಐಟಿ ಮುಖ್ಯಸ್ಥರ ಬದಲಾವಣೆಯ ಜೊತೆಗೆ ತನಿಖಾ ತಂಡದಲ್ಲಿ ಮತ್ತೊಂದು ಪ್ರಮುಖ ಹುದ್ದೆಯ ಪರಿಷ್ಕರಣೆಯಾಗಿದೆ. ಪ್ರಸ್ತುತ ಹಾಸನ ಡಿವೈಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀನಿಧಿ ಅವರನ್ನು ಎಸ್‌ಐಟಿ ತಂಡಕ್ಕೆ ಹೊಸದಾಗಿ ನಿಯೋಜನೆ ಮಾಡಲಾಗಿದೆ. ಈ ಹಿಂದೆ ತಂಡದಲ್ಲಿದ್ದ ಡಿವೈಎಸ್‌ಪಿ ವೆಂಕಟೇಶ ಪ್ರಸನ್ನ ಅವರು ಸಹ ತಮ್ಮನ್ನು ತನಿಖಾ ತಂಡದಿಂದ ಹೊರಗಿಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಅವರ ಸ್ಥಾನಕ್ಕೆ ಶ್ರೀನಿಧಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ. ನೂತನ ಮುಖ್ಯಸ್ಥರ ನೇತೃತ್ವದಲ್ಲಿ ಸೌಜನ್ಯಾ ಪ್ರಕರಣದ ಮರುತನಿಖೆ ಇನ್ನುಮುಂದೆ ಚುರುಕುಗೊಳ್ಳಲಿದೆ.





