Billava Warriors – Billava News Portal
Wednesday, 28 October 2026
General News

ಬೆಮ್ಮೆರ್ – ಬ್ರಹ್ಮ

26 Dec 2023

Author Venkatesh Karkera

Team Prajnaanambrahmah

ತುಳುನಾಡ ದೈವಗಳಲ್ಲಿ ಅತಿಪ್ರಮುಖ ಶಕ್ತಿ ಎಂದರೆ ಬೆಮ್ಮೆರ್ ಯಾ ಬೆರ್ಮೆರ್. ಆಲಡೆಗಳಲ್ಲಿ, ನಾಗಮೂಲಸ್ಥಾನಗಳಲ್ಲಿ, ಗರಡಿಗಳಲ್ಲಿ, ದೈವಸ್ಥಾನಗಳಲ್ಲಿ ಹೀಗೆ ಹೆಚ್ಚುಕಡಿಮೆ ತುಳುನಾಡ ಉದ್ದಗಲಕ್ಕೂ ಬೇರೆ ಬೇರೆ ಹೆಸರಿನಿಂದ ಆರಾಧಿಸಲ್ಪಡುತ್ತಿದೆ. ಕೆಲವೆಡೆ ಬೆಮ್ಮೆರ್ ಕೋಲನೇಮ ಪಡೆದುಕೊಂಡು ದೈವಗಳಂತೆ ಆರಾಧನೆ ಪಡೆದರೆ ಇತರೆಡೆ ದೇವರಂತೆ ಪೂಜಿಸಲ್ಪಡುತ್ತಾರೆ.
ಕೆಲ‌ ಸ್ಥಳಗಳಲ್ಲಿ ಬೆಮ್ಮೆರ್ ಪುನರ್ನಾಮಕಗೊಂಡು ಬ್ರಹ್ಮಲಿಂಗೇಶ್ವರ / ಮಹಾಲಿಂಗೇಶ್ವರ/ ಖಡ್ಗೇಶ್ವರಿ ಹೀಗೆಲ್ಲಾ ಹೊಸ ಹೆಸರಿನೊಂದಿಗೆ ಪೂಜಿಸಲ್ಪಡುತ್ತಿದ್ದಾರೆ. ಈ ರೀತಿಯ ಪುನರ್ನಾಮಕರಣ ಸರಿಯೋ ತಪ್ಪೋ‌ ಎಂಬುದು ಖಂಡಿತವಾಗಿಯೂ ವಿಚಾರಾರ್ಹ. ಆದರೆ ಈಗೀಗ ಈ ವಿಚಾರ ಜಾತಿಯ‌ ಬಣ್ಣ ಪಡೆದುಕೊಳ್ಳುತ್ತಿರುವುದು ವಿಷಾದನೀಯ. ಈ ರೀತಿಯ ನಾಮಾಂತರಕ್ಕೆಲ್ಲಾ ವೈದಿಕರೇ ಕಾರಣ, ನಮ್ಮ ದೈವಗಳ ವೈದಿಕೀಕರಣ ಎಂದೆಲ್ಲ ವೈದಿಕ ಸಮುದಾಯವನ್ನು ದೂರುವುದು ಅಲ್ಲಲ್ಲಿ ಕಂಡುಬರುತ್ತಿದೆ. © https://prajnaanambrahmah.wordpress.com

‘ಬೆಮ್ಮೆರ್’ ಎಂಬ ಶಬ್ದ ‘ಪೆರಿಯಮ್ಮೆರ್’ ಎಂಬ ಪದದಿಂದ ಹುಟ್ಟಿದೆಯೇ ಹೊರತು ‘ಬ್ರಹ್ಮ’ ಎಂಬ ಪದದಿಂದ ಅಲ್ಲ, ಈ ‘ಬೆಮ್ಮೆರ್’ ಎಂಬಾತ ತುಳುನಾಡಿನ ಮೂಲನಿವಾಸಿಗಳ ಹಿರಿಯನೋ ಅಥವಾ ರಾಜನೋ ಆಗಿರಬೇಕು ಎಂಬುದು ವೈದಿಕೀಕರಣ ವಿರೋಧಿಗಳ ಅಭಿಪ್ರಾಯ. ಅಂತೂ ಇಂತೂ ಬೆಮ್ಮೆರ್ ಬ್ರಹ್ಮನಲ್ಲ ಎಂಬುದು ಅವರ ವಾದ. ಬೆಮ್ಮೆರ್ ಬ್ರಹ್ಮನೋ ಅಲ್ಲವೋ ಹೇಳುವುದು ಕಷ್ಟಸಾಧ್ಯ. ಆದರೆ ‘ಬ್ರಹ್ಮ’ ಅಂದ ಕೂಡಲೆ ತಥಾಕಥಿತ ‘ವೈದಿಕರ ಚತುರ್ಮುಖ ಬ್ರಹ್ಮ’ ಎಂದು ಅರ್ಥೈಸಿಕೊಳ್ಳುವುದು ತಥಾಕಥಿತ ಬುದ್ದಿಜೀವಿಗಳ ಮೊದಲ ಲಕ್ಷಣ. ನಮಗೆ ಅದು ಏನು ಎಂಬುದನ್ನು ಸಾಧಿಸುವುದಕ್ಕಿಂತ ಅದು ಏನು ಅಲ್ಲ ಎಂಬುದನ್ನು ಸಾಧಿಸುವುದೇ ಮುಖ್ಯವಾದಾಗ ಆಗುವ ಗೊಂದಲವಿದು. ಕತ್ತಲೆ ಕೋಣೆಯಲ್ಲಿ ನಡೆಯುವಾಗ ಕಣ್ಣನ್ನು ಸಾಧ್ಯವಿದ್ದಷ್ಟು ತೆರೆದಿಟ್ಟುಕೊಳ್ಳುವುದು ಜಾಣತನ. ಅದರ ಬದಲಿಗೆ ಮೊದಲೇ ಒಂದು ಕಣ್ಣುಪಟ್ಟಿ ಕಟ್ಟಿಕೊಂಡು ನಡೆವವರನ್ನು ಹಿಡಿಯಲು ಪ್ರಯತ್ನಿಸುವುದು ವ್ಯರ್ಥ.
ವೈದಿಕ ಸಾಹಿತ್ಯದಲ್ಲಿ ಬ್ರಹ್ಮ ಅಂದರೆ ಚತುರ್ಮುಖ ಬ್ರಹ್ಮ ಒಬ್ಬನೇ ಅಲ್ಲ. ಚತುರ್ಮುಖ ಬ್ರಹ್ಮನ ಸ್ಥಾನದಲ್ಲಿ ಈಗಾಗಲೆ ಹಲವಾರು ಬ್ರಹ್ಮರು ಆಗಿಹೋಗಿದ್ದಾರೆ. ಮುಂದೆಯೂ ಹಲವಾರು ಬ್ರಹ್ಮರು ಬರಲಿದ್ದಾರೆ. ತ್ರಿಮೂರ್ತಿಗಳು ಮತ್ತು ಇತರೆಲ್ಲಾ ದೇವತೆಗಳಿಗೂ ಸೃಷ್ಟಿಕರ್ತನಾದ ವಿಶ್ವನಿಯಾಮಕ ಶಕ್ತಿಯನ್ನು ವೇದಾಂತದಲ್ಲಿ ‘ಬ್ರಹ್ಮನ್’, ‘ಪರಬ್ರಹ್ಮ’, ‘ಆತ್ಮ’, ‘ಪರಮಾತ್ಮ’ ಇತ್ಯಾದಿಯಾಗಿ ಕರೆಯಲಾಗುತ್ತದೆ. ವೈಷ್ಣವರು ಅದನ್ನೇ ‘ಮಹಾವಿಷ್ಣು’ ಎಂದು, ಶೈವರು ‘ಪರಶಿವ’ ಎಂದು, ಶಾಕ್ತೇಯರು ‘ಆದಿಶಕ್ತಿ/ ಪರಾಶಕ್ತಿ’ ಎಂದು, ಗಾಣಪತ್ಯರು ‘ಮಹಾಗಣಪತಿ’ ಎನ್ನುವುದು. ನಮ್ಮಲ್ಲಿ ಕಂಡುಬರುವ ಪ್ರಾಚೀನ ದೇವಾಲಯಗಳಲ್ಲೆಲ್ಲಾ ‘ಮಹಾಗಣಪತಿ/ ಮಹಾಲಿಂಗೇಶ್ವರ/ ಮಹತೋಬಾರ ಎಂದೆಲ್ಲಾ ಈ ಮಹತ್ ತತ್ವಕ್ಕೇ ಮಣೆ ಹಾಕಿದ್ದನ್ನು ಗಮನಿಸಿ. ಹಾಗಾಗಿ ಬೆಮ್ಮೆರ್ ಚತುರ್ಮುಖ ಬ್ರಹ್ಮನೇ ಆಗಬೇಕಿಲ್ಲ, ಪರಬ್ರಹ್ಮನೂ ಆಗಬಹುದು, ಯಾಕೆ ಆಗಿರಬಾರದು?
ಬ್ರಹ್ಮ ಎಂಬುದಕ್ಕೆ ಬೃಹತ್ ಮಾತ್ರವಲ್ಲದೆ ಹಿರಿಯ ಎಂಬ ಅರ್ಥವೂ ಸಂಸ್ಕೃತದಲ್ಲಿ ಇದೆ. ಈ ಹಿರಿಯ ಮತ್ತು ಪೆರಿಯಮ್ಮೆರ್ ಎಂಬ ತುಳು ಮೂಲಗಳನ್ನು ಹೋಲಿಸಿ‌‌ ನೋಡಿ. ಬೆಮ್ಮೆರ್ ಮತ್ತು‌ ಬ್ರಹ್ಮ ಶಬ್ದಗಳಲ್ಲಿ ಅರ್ಥವ್ಯತ್ಯಾಸ ಏನಾದರೂ ಇದೆಯೆ?
ಬೆಮ್ಮೆರ್ ಬಗ್ಗೆ ಹೇಳುವುದು ಮುಂದಕ್ಕೂ ಇದ್ದೇ ಇದೆ. ಅಲ್ಲಿಯವರೆಗೆ ನಿಮ್ಮ ಅಂತರಂಗದಲ್ಲಿ ಬೆಮ್ಮೆರ್‌ರ ಬಗ್ಗೆ ಚಿಂತನೆ ನಡೆಸಲು ಹೇಳುತ್ತಾ ಇಂದಿನ ಬರವಣಿಗೆಗೆ ವಿಶ್ರಾಂತಿ‌ ನೀಡುತ್ತೇನೆ.

Related news

General

Test

28 Oct 2026

test

General

ಎಂ.ಟೆಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಉಡುಪಿ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಚಿನ್ನದ ಪದಕ

20 Aug 2026

ಉಡುಪಿ: ಉಡುಪಿ ತಾಲ್ಲೂಕಿನ ಮಠದಬೆಟ್ಟು ಗ್ರಾಮದ ನಿವಾಸಿ ಸ್ಮಿತಾ ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು ಇಲ್ಲಿ ವ್ಯಾಸಂಗ ಮಾಡಿದ ಸ್ಮಿತಾ ಪೂಜಾರಿ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ನಡೆಸಿದ ಎಂ.ಟೆಕ್ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಚಿನ್ನ

General

ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಅಂಗವಾಗಿ ‘ಗುರುಚಿತ್ತಾರ-2026’ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ

18 Aug 2026

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ಸ್ಪರ್ಧೆಯಲ್